ವೀರರಾಜೇಂದ್ರ 2 (ಚಿಕ್ಕವೀರರಾಜೇಂದ್ರ)
	? - 1859. ಕೊಡಗಿನ ಹಾಲೇರಿ ಮನೆತನದ ಅರಸು (1820-34). ಎರಡನೆಯ ಲಿಂಗರಾಜೇಂದ್ರನ ಮಗ. ಪಟ್ಟಕ್ಕೆ ಬಂದಾಗ ಇವನು ಹರೆಯದ ವಯಸ್ಸಿನವನು ಮತ್ತು ಅನನುಭವಿ. ಹೀಗಾಗಿ ಇವನು ತನ್ನ ದುರ್ಮಂತ್ರಿಗಳ ಒಡನಾಟದಲ್ಲಿ ದುವ್ರ್ಯಸನಗಳಿಗೆ ಬಲಿಬಿದ್ದು, ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದಲ್ಲಿ ಹೆಚ್ಚು ಕಡಿಮೆ ಕ್ರೂರವಾಗಿ ನಡೆದುಕೊಂಡ. ತನ್ನ ಬಂಧುಗಳಿಂದ ಅಧಿಕಾರಕ್ಕೆ ಚ್ಯುತಿ ಬರಬಹುದೆಂದು ಭಾವಿಸಿ ಅನೇಕ ಜನ ಸಂಬಂಧಿಗಳನ್ನು ಕೊಲ್ಲಿಸಿದ ಅಥವಾ ಸೆರೆಯಲ್ಲಿಟ್ಟ. 1825ರಲ್ಲಿ ರಾಜದ್ರೋಹದ ಆರೋಪ ಹೊರಿಸಿ ಸಮೀಪಬಂಧುವಾದ ಚನ್ನವೀರನನ್ನೂ ಅವನ ಕುಟುಂಬದವರನ್ನೂ ಕೊಲ್ಲಿಸಿದ. ಕೊಡಗು ರಾಜ್ಯದ ಮೇಲ್ವಿಚಾರಕನಾಗಿದ್ದ ಮೈಸೂರಿನ ರೆಸಿಡೆಂಟ್ ಈ ಕೊಲೆಗಳ ಬಗೆಗೆ ಪ್ರಶ್ನಿಸಿದಾಗ ಇದಕ್ಕೆ ನಾನು ಸ್ವತಂತ್ರ ರಾಜ, ಇದು ಒಳಾಡಳಿತ ವಿಷಯ, ವಿವರ ತಿಳಿಸಬೇಕಾಗಿಲ್ಲ ಎಂದು ಉತ್ತರಿಸಿದ. 1832ರ ಹೊತ್ತಿಗೆ ಪರಿಸ್ಥಿತಿ ಗಡುಸಾಯಿತು. ಬಂಧುಗಳ ಕೊಲೆಗಳಿಂದ ಚಿಕ್ಕವೀರರಾಜೇಂದ್ರನ ಸೋದರಿ ದೇವಮ್ಮಾಜಿಯ ಗಂಡ ಚನ್ನಬಸವಪ್ಪ ದಂಗೆ ಏಳಲು ಸಿದ್ಧತೆ ಮಾಡಿಕೊಂಡ. ರಾಜನಿಗೆ ಸುಳುಹು ತಿಳಿದು ಚನ್ನಬಸವಪ್ಪನನ್ನು ಸೆರೆಹಿಡಿಯಲು ಯತ್ನಿಸಿದ. ಆದರೆ ಅವನು ತನ್ನ ಪತ್ನಿ ಹಾಗೂ ಕೆಲವು ನಿಷ್ಠಾವಂತ ಹಿಂಬಾಲಕರ ಸಮೇತ ಕೊಡಗಿನ ಗಡಿ ದಾಟಿ ಬ್ರಿಟಿಷ್ ರೆಸಿಡೆಂಟರ ಆಶ್ರಯಪಡೆದ. ಇದನ್ನು ತಿಳಿದ ರಾಜ ಅನುಕ್ರಮವಾಗಿ ರೆಸಿಡೆಂಟನಿಗೆ, ಮದರಾಸಿನ ಗವರ್ನರ್‍ನಿಗೆ ಹಾಗೂ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಂಕ್‍ನಿಗೆ ಬರೆದು ಚನ್ನಬಸವಪ್ಪನನ್ನು ತನಗೆ ಒಪ್ಪಿಸಬೇಕೆಂದು ಕೇಳಿದ. ಆದರೆ ಅದು ಫಲಕಾರಿಯಾಗಲಿಲ್ಲ. ಇದರಿಂದ ಕುಪಿತನಾದ ವೀರರಾಜೇಂದ್ರ ಸುತ್ತುಮುತ್ತಲ ರಾಜರಿಗೆ ಸುತ್ತೋಲೆ ಕಳಿಸಿ ಬ್ರಿಟಿಷರ ವಿರುದ್ಧ ಬಂಡಾಯ ಮಾಡಲು ಒಗ್ಗಟ್ಟಿಗಾಗಿ ಚಿತಾವಣೆಮಾಡಿದ. ಇದನ್ನರಿತ ಬ್ರಿಟಿಷರು ಕೊಡಗಿನ ಮೇಲೆ ಚತುರ್ಮುಖಿ ದಾಳಿಗೆ ವ್ಯವಸ್ಥೆಮಾಡಿದರು (1834). ಹೆದರಿದ ರಾಜ ನಾಲ್ಕುನಾಡಿನಲ್ಲಿ ಅಡಗಿ ಕೂತು ಬ್ರಿಟಿಷರ ವಿರುದ್ಧ ಯುದ್ಧಮಾಡಬೇಡಿ ಎಂದು ತನ್ನ ಸೈನ್ಯಕ್ಕೆ ಆದೇಶವಿತ್ತು ರಾಜಿಯಾಗಲು ಮುಂದಾದ. ಆದರೆ ಈ ಆದೇಶ ಮುಟ್ಟುವಷ್ಟರಲ್ಲಿ ಆಗಲೆ ಮೂರು ಕಡೆ ಯುದ್ಧ ಸಾಗಿತ್ತು. ಬ್ರಿಟಿಷ್‍ದಂಡು ಮಡಿಕೇರಿಯನ್ನು ಆಕ್ರಮಿಸಿತು (1834 ಏಪ್ರಿಲ್ 6). ಚಿಕ್ಕವೀರರಾಜ ನಾಲ್ಕು ನಾಡಿನಿಂದ ಮಡಿಕೇರಿಗೆ ಬಂದು ಶರಣಾದ. ಆದರೆ ರಾಜ ಎಷ್ಟು ಕೇಳಿಕೊಂಡರೂ ಸಿಂಹಾಸನ ಉಳಿಯಲಿಲ್ಲ. ಬ್ರಿಟಿಷ್ ಅಧಿಕಾರಿ ಫ್ರೇಸರ್ ಕೆಲವರನ್ನು ಸಲಹೆ ಕೇಳಿದಂತೆ ಮಾಡಿ, ಜನಾಭಿಪ್ರಾಯದಂತೆ ರಾಜನಿಗೆ ಪದಚ್ಯುತಿ ಎಂದು ಘೋಷಿಸಿ ಬ್ರಿಟಿಷ್ ಆಡಳಿತ ಸ್ಥಾಪಿಸಿದ. ಸಂಧಾನದ ಫಲವಾಗಿ ರಾಜನಿಗೆ ಜೀವದಾನ, ಜೀವನಾಂಶ ದೊರೆತವು. ರಾಜನನ್ನು ಕುಟುಂಬ ಸಮೇತ ಮೊದಲು ವೆಲ್ಲೂರಿನಲ್ಲೂ ಅನಂತರ ಕಾಶಿಯಲ್ಲೂ ನೆಲೆಗೊಳಿಸಲಾಗಿತ್ತು. 1852ರಲ್ಲಿ ಕುಟುಂಬದ ಕೆಲವರ ಸಮೇತ ಇಂಗ್ಲೆಂಡಿಗೆ ಹೋದ. ಅಲ್ಲಿ ಇವನ ಪ್ರೀತಿಯ ಮಗಳು ಕ್ರೈಸ್ತಧರ್ಮ ಸ್ವೀಕರಿಸಿ ವಿಕ್ಟೋರಿಯ ಗೌರಮ್ಮನಾಗಿ ಆಂಗ್ಲನೊಬ್ಬನನ್ನು ಲಗ್ನವಾದಳು. ವೀರರಾಜೇಂದ್ರ 1859 ಸೆಪ್ಟೆಂಬರ್ 24ರಂದು ಲಂಡನ್‍ನಲ್ಲಿ ನಿಧನನಾದ.

	ಈತನನ್ನು ಬ್ರಿಟಿಷ್ ಚರಿತ್ರಕಾರರು ಬಹು ಕ್ರೂರಿ ಎಂದು ಚಿತ್ರಿಸಿದ್ದಾರೆ. ಆದರೆ ಇವನು ನ್ಯಾಯನಿಷ್ಠ ದೊರೆ, ರೈತರು ಮತ್ತು ಸಾಮಾನ್ಯ ಜನ ಇವನ ರಾಜ್ಯದಲ್ಲಿ ಸಂತುಷ್ಟರಾಗಿದ್ದರು, ದೇಶದ್ರೋಹ ಅಥವಾ ರಾಜದ್ರೋಹದ ವಿಷಯದಲ್ಲಿ ಮಾತ್ರ ಕಠಿಣವಾಗಿ ವರ್ತಿಸುತ್ತಿದ್ದ ಎಂಬ ಅಭಿಪ್ರಾಯ ಸಹ ಇದೆ.	       				
		 (ಸಿ.ಕೆ.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ